ಕೃತಕ ಬೆಣ್ಣೆ

ಸಸ್ಯ ಹಾಗೂ ಪ್ರಾಣಿಜನ್ಯ ತೈಲಗಳನ್ನು ಉಪಯೋಗಿಸಿ ಕೆನೆ ತೆಗೆದ ಹಾಲನ್ನು ಸೇರಿಸಿ ಕೃತಕವಾಗಿ ತಯಾರುಮಾಡುವ ಬೆಣ್ಣೆ (ಮಾರ್ಗರಿನ್). ಹಿಂದೊಂದು ಕಾಲದಲ್ಲಿ, ಜನಗಳ ಉಪಯೋಗಕ್ಕೆ ಹಸುಗಳಿಂದ ದೊರೆಯುವ ಬೆಣ್ಣೆ ಸಾಲದಾಗಿ ಅದರ ಬೆಲೆ ಮಿತಿಮೀರಿದಾಗ, ಬದಲಿ ಬೆಣ್ಣೆಯ ಅವಶ್ಯಕತೆ ಎಲ್ಲೆಲ್ಲಿಯೂ ಕಂಡುಬಂತು. ಮೂರನೆಯ ನೆಪೋಲಿಯನ್ ದೊರೆ ಇದನ್ನು ತಯಾರಿಸಲು ಒಂದು ಸ್ಪರ್ಧೆಯನ್ನು ಸಹ ಏರ್ಪಡಿಸಿದ್ದ. ಇದರಲ್ಲಿ ಭಾಗಿಗಳಾದವರಲ್ಲಿ ಫ್ರೆಂಚ್ ರಾಸಾಯನಿಕ ತಜ್ಞ ಹಿಪ್ಪೊಲೈಟ್ ಮೆಗೆ ಮೌರಿಸ್ ಎಂಬಾತ ಕೃತಕ ಬೆಣ್ಣೆಯನ್ನು ಯಶಸ್ವಿಯಾಗಿ ತಯಾರಿಸಿ(1860) ಪಾರಿತೋಷಕವನ್ನು ಪಡೆದ(1870). ಈ ಪ್ರಾಣಿಗಳ ನೆಣವನ್ನು ಉಪಯೋಗಿಸಿ ಕೃತಕ ಬೆಣ್ಣೆಯನ್ನು ತಯಾರಿಸಿದ್ದ. ಇದಕ್ಕೆ ಮಾರ್ಗರಿನ್ ಎಂದು ಹೆಸರಿಟ್ಟರು. ಇದು ಬೇಗನೆ ಪ್ರಪಂಚದ ಇತರ ಭಾಗಗಳಲ್ಲಿ ಉಪಯೋಗಕ್ಕೆ ಬಂತು. ಪ್ರಮುಖವಾಗಿ ಯೂರೋಪು ಹಾಗೂ ಅಮೆರಿಕದ ಕೈಗಾರಿಕಾ ಪ್ರಧಾನ ನಗರಗಳಲ್ಲಿ ಇದರ ಉಪಯೋಗದ ಅವಶ್ಯಕತೆ ತಲೆದೋರಿತು. 1869ರ ಹೊತ್ತಿಗೆ ಇಂಗ್ಲೆಂಡಿನಲ್ಲಿ ಮತ್ತು 1873ರ ವೇಳೆಗೆ ಅಮೆರಿಕದಲ್ಲಿ ಈ ವಸ್ತುವಿನ ತಯಾರಿಕೆಯ ಮೇಲೆ ಸರ್ಕಾರದ ವತಿಯಿಂದ ಸ್ವಾಮ್ಯ ಸನ್ನದು ಪಡೆಯಲಾಯಿತು.

ಕೃತಕ ಬೆಣ್ಣೆಯಲ್ಲಿ ಎರಡು ರೂಪಗಳಿವೆ. ಒಂದು ಕೊಬ್ಬಿನ ರೂಪ. ಇನ್ನೊಂದು ಹಾಲಿನ ರೂಪ. ಕೊಬ್ಬಿನ ರೂಪವನ್ನು ತಯಾರಿಸಲು ನಾನಾರೀತಿಯ ಕಚ್ಚಾಪದಾರ್ಥಗಳನ್ನು ಉಪಯೋಗಿಸುವರು. ತಾಳೆ ಜಾತಿಯ ಮರದ ಹಣ್ಣು ಹಾಗೂ ಅದರ ತಿರುಳು, ತೆಂಗು ಹಾಗೂ ಕಡಲೆಕಾಯಿ, ಸೋಯಾ ಅವರೆ, ಹರಳು ಬೀಜ ಸೂರ್ಯಕಾಂತಿ ಬೀಜಗಳಿಂದ ಬರುವ ತೈಲಗಳನ್ನು ಉಪಯೋಗಿಸುವರು. ಪ್ರಾಣಿಗಳಿಂದ ಬರುವ ತೈಲಗಳೆಂದರೆ ತಿಮಿಂಗಿಲದೆಣ್ಣೆ. ದನ, ಕುರಿ ಮತ್ತು ಇತರ ಪ್ರಾಣಿಗಳ ನೆಣ. ಹಾಲಿನ ರೂಪವನ್ನು ತಯಾರಿಸಲು ಉಪಯೋಗಿಸುವ ಕಚ್ಚಾಪದಾರ್ಥವೆಂದರೆ ಕೆನೆತೆಗೆದ ಹಾಲು. ಚೆನ್ನಾಗಿ ಕೊಬ್ಬಿನೊಂದಿಗೆ ಸೇರಲು ಸಹಾಯವಾಗುವಂತೆ ಮಾಡಲು ಹಾಲನ್ನು ಹುಳಿಬರಿಸಲಾಗುವುದು. ಉಪ್ಪು, ಇತರ ವಸ್ತುಗಳನ್ನು ರುಚಿಗಾಗಿ ಉಪಯೋಗಿಸುವರು. ಕಾಲ ಬದಲಾದಂತೆ ವ್ಯವಸಾಯ ರಂಗದಲ್ಲಿ ಪ್ರಗತಿಯಾಗಿ ಆದಾಯ ನೀಡುವ ಎಣ್ಣೆಕಾಳಿನ ಬೆಳೆಯನ್ನು ಹೆಚ್ಚಿಗೆ ಬೆಳೆಸಲು ಆರಂಭಮಾಡಿದರು. ಇದರಿಂದ ಸಸ್ಯತೈಲ ಸುಲಭರೀತಿಯಲ್ಲಿ ದೊರೆಯುವಂತಾಯಿತು. ಇದನ್ನು ಕೃತಕ ಬೆಣ್ಣೆ ತಯಾರಿಕೆಯಲ್ಲಿ ಅಳವಡಿಸಲು ಅನೇಕ ರೀತಿಯ ಸಂಶೋಧನೆ ಸಾಗಿತು. ಮೊದಲನೆಯ ಮಹಾಯುದ್ಧದ ಬಳಿಕ ಸೋಯಾ ಅವರೆ ತೈಲದ ಉಪಯೋಗ ಆರಂಭವಾಯಿತು. ಹರಳು ಬೀಜದ ಎಣ್ಣೆಯನ್ನು ಸೇರಿಸಲು ತೊಡಗಿದ್ದು 1937ರಲ್ಲಿ. ಇಪ್ಪತ್ತನೆಯ ಶತಮಾನದ ಆದಿಯಲ್ಲಿ ಮೂಲ ಕೃತಕ ಬೆಣ್ಣೆಯಲ್ಲಿದ್ದ ಒಂದು ರೀತಿಯ ವಿಪರೀತ ವಾಸನೆ ಹಾಗೂ ಅಹಿತಕರವಾದ ರುಚಿಯನ್ನು ಸ್ಥಗಿತಗೊಳಿಸಲು ಹೆಚ್ಚು ಹೆಚ್ಚು ಕಾಳಿನ ತೈಲವನ್ನು ಉಪಯೋಗಿಸಲು ತೊಡಗಿದರು. ಇಂದು ತಯಾರಾಗುವ ಕೃತಕ ಬೆಣ್ಣೆ ಹಿಂದಿನ ಸ್ಥಿತಿಗಿಂತ ಅನೇಕ ರೀತಿಯಲ್ಲಿ ಬದಲಾವಣೆ ಹೊಂದಿದೆ. ಅದಕ್ಕೆ ಉಪಯೋಗಿಸುವ ಸಾಮಗ್ರಿಗಳಲ್ಲಿ ಬೇಕಾದಷ್ಟು ಬದಲಾವಣೆಗಳಾಗಿವೆ. ಕೃತಕ ಬೆಣ್ಣೆ ಎಲ್ಲ ವಿಧದಲ್ಲಿಯೂ ಹಿತಕರವಾಗಿರುವಂತೆ ಮಾಡಲಾಗಿದೆ.

ಕೃತಕಬೆಣ್ಣೆಯಲ್ಲಿ 80% ಮೇದಸ್ಸಿದೆ. ಇದು ಸಸ್ಯತೈಲಗಳಿಂದ ಆದುದು. 16% ಕೆನೆತೆಗೆದ ಹಾಲು ಮತ್ತು ಹುಳಿಬರಿಸಿದ ಹಾಲು ಇವೆ. ಮಿಕ್ಕ ಭಾಗದಲ್ಲಿ ಮುಖ್ಯವಾದ ವಿಟಮಿನುಗಳು ಎ ಮತ್ತು ಡಿ ಹಾಗೂ ಇತರ ರುಚಿ ವಸ್ತುಗಳಿವೆ. ಪ್ರಧಾನವಾಗಿ ಕೃತಕ ಬೆಣ್ಣೆಯನ್ನು ಕೊಬ್ಬಿನ ಆಹಾರವಾಗಿ ತೆಗೆದುಕೊಳ್ಳಲಾಗುವುದು. ಇದರಲ್ಲಿ ಅಧಿಕ ಕೆಲೊರಿ ಮೌಲ್ಯವಿದೆ. ಪ್ರಾಣಿಗಳ ಮಾಂಸದ ಅಂಶ 1% ರಷ್ಟು ಇರುವ ಕೃತಕ ಬೆಣ್ಣೆಗೆ ಒಲಿಯೊ ಮಾರ್ಗರಿನ್ ಎಂದು ಹೆಸರು. 100 ಗ್ರಾಂ ತೂಗುವ ಕೃತಕ ಬೆಣ್ಣೆಯಲ್ಲಿರುವ ಆಹಾರ ಘಟಕಗಳು ಹೀಗಿವೆ: ನೀರು 13.7 ಗ್ರಾಂ. ಸಾರಜನಕ 0.2ಗ್ರಾಂ: ಮೇದಸ್ಸು 85.3 ಗ್ರಾಂ; ಶರ್ಕರ ಪಿಷ್ಟ ಇಲ್ಲ; ಕಿಲೊ ಕೆಲೋರಿ 795; ಲವಣ ಮತ್ತು ಕಬ್ಬಿಣ ಅನುಕ್ರಮವಾಗಿ 4.1 ಮತ್ತು 0.3 ಮಿಗ್ರಾಂ, ವಿಟಮಿನ್ ಎ ಮತ್ತು ಡಿ ಅನುಕ್ರಮವಾಗಿ 3,000 ಮತ್ತು 300 ಇ.ಯು.ಥಯಮಿನ್, ರಿಬೊಫ್ಲೇವಿನ್, ನಯಾಸಿನ್‍ಗಳ ಅಂಶ ಸಹ ಉಂಟು.               (ಜಿ.ಆರ್.ಆರ್.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ